Short-term sheep and goat farming : ಎರಡರಿಂದ ಮೂರು ತಿಂಗಳ ಗಂಡು ಕುರಿ ಮರಿಗಳನ್ನು ತಂದು ನಂತರ ಆರು ತಿಂಗಳು ಸಾಕಿ ಮಾರಾಟ ಮಾಡುವ ವಿಧಾನವೇ ಅಲ್ಪಾವಧಿಯ ಕುರಿ ಸಾಕಾಣಿಕೆ. ಹೆಚ್ಚುತ್ತಿರುವ ಕಾರ್ಮಿಕರ ಸಮಸ್ಯೆ, ಸಾಂಕ್ರಾಮಿಕ ರೋಗಗಳ ಹಾವಳಿ, ಮೇವಿನ ಖರ್ಚು, ಮೇವಿನ ಲಭ್ಯತೆ, ಬರಗಾಲಗಳಿಂದಾಗಿ ರೈತರು ಹೈನುಗಾರಿಕೆಯಲ್ಲಿ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ.
ಇಂಥವರಿಗೆ ಅಲ್ಪಾವಧಿಯ ಆಡುಕುರಿ ಸಾಕಾಣಿಕೆ (Short-term sheep and goat farming) ಪದ್ಧತಿ ದೊಡ್ಡ ವರದಾನವಾಗುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಕಡಿಮೆ ಅವಧಿಯಲ್ಲಿ ಪಾಲನೆ ಹಾಗೂ ಪೋಷಣೆ ಮಾಡಬಹುದು. ಮಾರುಕಟ್ಟೆಯ ಬೇಡಿಕೆ ಆಧರಿಸಿಯೂ ಪಾಲನೆ ಮಾಡಬಹುದು. ಉದಾ: ಬಕ್ರೀದ್ ಹಬ್ಬ, ದಸರಾ ಹಬ್ಬಕ್ಕೆ ಮಾರಾಟ ಮಾಡುವಂತೆ ಪಾಲನೆ ಮಾಡುವುದರಿಂದ ನಿರೀಕ್ಷೆಗಿಂತ ಹೆಚ್ಚಿನ ಲಾಭ ಗಳಿಸಬಹುದು.
ವಿಶೇಷವಾಗಿ ಅಲ್ಪಾವಧಿ ಆಡುಕುರಿ ಸಾಕಾಣಿಕೆಗೆ ಹೆಚ್ಚಿನ ಬಂಡವಾಳದ ಅವಶ್ಯಕತೆ ಇಲ್ಲ. ಬರಗಾಲದಂತಹ ಸಂದರ್ಭದಲ್ಲಿ ಎತ್ತು, ಎಮ್ಮೆ, ಆಕಳುಗಳನ್ನು ಮೇವು ಮತ್ತು ನೀರಿನ ಕೊರತೆಯಿಂದಾಗಿ ಸಿಕ್ಕಷ್ಟು ಬೆಲೆಗೆ ಮಾರಿ ಪರಿತಪಿಸಬೇಕಾಗುತ್ತದೆ. ಆದರೆ ಅಲ್ಪಾವಧಿ ಆಡುಕುರಿ ಸಾಕಾಣಿಕೆಯಲ್ಲಿ ಇಂತಹ ಸಂಕಟ ಇರಲಾರದು.
ಇದನ್ನೂ ಓದಿ: mushroom cultivation information : ಅತಿ ಕಡಿಮೆ ಜಾಗದಲ್ಲಿ ಹೆಚ್ಚು ಆದಾಯ ಗಳಿಸುವ ಅಣಬೆ ಬೇಸಾಯ
ನೀರು ಮತ್ತು ಮೇವು ಸೌಕರ್ಯವಿದ್ದಾಗಲಷ್ಟೇ ಪಾಲನೆ ಮಾಡಬಹುದು. ಈ ಪದ್ಧತಿಯಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡಬಹುದು ಜೊತೆಗೆ ಕೆಲಸಗಾರರ ಮೇಲಿನ ಅವಲಂಬನೆಯೂ ಕಡಿಮೆಯಾಗುತ್ತದೆ.
ಈಗಾಗಲೇ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ಗಂಡು ಕುರಿಯ ಮಾಂಸಕ್ಕೆ ಅತಿಯಾದ ಬೇಡಿಕೆ ಇದೆ. ಈ ಬೇಡಿಕೆಯನ್ನು ಅಲ್ಪಾವಧಿಯ ಗಂಡು ಕುರಿ ಸಾಕಾಣಿಕೆ ಮೂಲಕ ಪೂರೈಸಬಹುದು.
2ರಿಂದ 3 ತಿಂಗಳ ವಯಸ್ಸಿನ ಗಂಡು ಕುರಿ ಮರಿ ಬೆಲೆಯು 3000 ರಿಂದ 3500 ರೂಪಾಯಿ ವರೆಗೆ ಇದೆ. ನಂತರ ಈ ಮರಿಗಳನ್ನು ಆರು ತಿಂಗಳು ಪಾಲನೆ ಮಾಡಿ ಮಾರಾಟ ಮಾಡಿದರೆ ದೊರೆಯುವ ಬೆಲೆ 8000 ರಿಂದ 10,000 ರೂಪಾಯಿ. ಅಂದರೆ ಸರಿಸುಮಾರು ಒಂದು ಕುರಿ ಮರಿ ಪಾಲನೆಯಿಂದ 6000 ರಿಂದ 7000 ರೂಪಾಯಿಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: RTC Aadhar link : ಮೊಬೈಲ್‌ನಲ್ಲೇ ರೈತರ ಜಮೀನು ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಸರಳ ವಿಧಾನ
ರೈತರು ಪಾಲಿಸಬೇಕಾದ ಅಂಶಗಳು
- ಮರಿ ಖರೀದಿ ನಂತರ ಕೂಡಲೆ ಜಂತುನಾಶಕ ಔಷಧಿಯನ್ನು ಕುಡಿಸಬೇಕು.
- ಎರಡನೇಯ ವಾರದಲ್ಲಿ ಎಲ್ಲಾ ಮರಿಗಳಿಗೆ ಪಿ.ಪಿ.ಆರ್ (ಹಿರೇಬೇನೆ) ಹಾಕಿಸಬೇಕು.
- 4ನೇ ವಾರದಲ್ಲಿ ಎಲ್ಲಾ ಮರಿಗಳಿಗೆ ಇ.ಟಿ ಲಸಿಕೆ ಅಂದರೆ, ಕರುಳುಬೇನೆ ಹಾಕಿಸಬೇಕು.
- 6ನೇ ವಾರದಲ್ಲಿ ನೆರಡಿ ರೋಗ ಇರುವ ಭಾಗಗಳಲ್ಲಿ ಎಲ್ಲಾ ಮರಿಗಳಿಗೆ ಅಂಥರಾಕ್ಸ್ ಲಸಿಕೆ ಹಾಕಿಸಬೇಕು.
- ಎಲ್ಲಾ ಮರಿಗಳಿಗೆ ದಿನಾಲು ಶುದ್ಧವಾದ ಕುಡಿಯುವ ನೀರನ್ನು ಕುಡಿಸಬೇಕು.
- ಪ್ರತಿದಿನ ಒಂದು ಸಲ ಹಸಿ ಮೇವನ್ನು, ಒಂದು ಸಲ ಒಣ ಮೇವನ್ನು ಕೊಡಬೇಕು.
- 6 ತಿಂಗಳು ತುಂಬಿದ ನಂತರ ಮರಿಗಳ ದೇಹದ ತೂಕ ಹೆಚ್ಚಲು ಪ್ರತಿ ಕುರಿ ಮರಿಗೂ ದಿನಾಲು ತಲಾ 30 ಗ್ರಾಂ ಹಿಂಡಿ/ದಾಣಿ ಮಿಶ್ರಣವನ್ನು ನೀಡಬೇಕು. ನಿಧಾನವಾಗಿ 80 ಗ್ರಾಂ ವರೆಗೆ ಹೆಚ್ಚಿಸಬೇಕು.
- ತಜ್ಞ ಪಶುವೈದ್ಯಾಧಿಕಾರಿಗಳಿಂದ ಆಗಾಗ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು.
- ದಿನಾಲು ಒಂದೆರೆಡು ಗಂಟೆ ಬಿಸಿಲಿನಲ್ಲಿ ಓಡಾಡಿಕೊಂಡಿರಲು ಬಿಡಬೇಕು.
- ಮೂರು ತಿಂಗಳಿಗೊಮ್ಮೆ ಜಂತುನಾಶಕ ಔಷಧಿಯನ್ನು ಕುಡಿಸಬೇಕು.
- ಕುರಿಗಳ ಮೈ ಮೇಲೆ ಹೋರ ಪರೋಪಜೀವಿಗಳಿದ್ದರೆ ಒಂದು ಲೀಟರ್ ನೀರಿನಲ್ಲಿ 10ಗ್ರಾಂ ತಂಬಾಕು ಪುಡಿಯನ್ನು ಹಾಕಿ ಕುದಿಸಿ, ಆರಿಸಿ, ಸೋಸಿ ಬಿಸಿಲಿನ ಅವಧಿಯಲ್ಲಿ ಮೈಮೇಲೆ ಹಚ್ಚಬೇಕು.
- ಹೆಚ್ಚು ಖರ್ಚು ಮಾಡಿ ಕೊಟ್ಟಿಗೆ ನಿರ್ಮಾಣ ಮಾಡದೆ ಮನೆಯ ಹಿತ್ತಲಿನಲ್ಲಿ ಸಾಧಾರಣ ಖರ್ಚಿನ ಕೊಟ್ಟಿಗೆ ನಿರ್ಮಾಣ ಮಾಡಿ ಪಾಲನೆ ಮಾಡಬಹುದಾಗಿದೆ.
ಈ ರೀತಿ ರೈತರು, ರೈತ ಮಹಿಳೆಯರು, ನಿರುದ್ಯೋಗಿ ಯುವಕರು, ಭೂ ರಹಿತ ಕಾರ್ಮಿಕರು ಅಲ್ಪಾವಧಿಯ ಕುರಿ ಸಾಕಾಣಿಕೆಯನ್ನು ಮಾಡಿ ಅಧಿಕ ಲಾಭವನ್ನು ಗಳಿಸಬಹುದು. ಈ ಪದ್ಧತಿಯು ಈಗಾಗಲೇ ಉತ್ತರ ಕರ್ನಾಟಕ, ಬೀದರ, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ರೈತರಿಂದ ಪಾಲನೆ ಮಾಡಲಾಗುತ್ತಿದೆ. ಈ ಪದ್ಧತಿಯಲ್ಲಿ ರೈತರು ಮಾಂಸದ ಕುರಿ ತಳಿಗಳನ್ನು ಪಾಲನೆ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದಾಗಿದೆ.
ಡಾ.ಅಣ್ಣಾರಾವ ಪಾಟೀಲ, ಪಶುವೈದ್ಯರು
ಇದನ್ನೂ ಓದಿ: Blue Aadhar Card : ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು?